ಇತಿಹಾಸ ದೃಷ್ಟಿ

ಪ್ರಾಚೀನ ಗ್ರೀಕರ ದೃಷ್ಟಿಯಲ್ಲಿ ಇತಿಹಾಸ ಅಂದರೆ ಸಂಶೋಧನೆ ಮತ್ತು ವರ್ತಮಾನ ಸಂಗ್ರಹಣೆ. ಇದನ್ನು ಇತಿಹಾಸ ಸಾಹಿತ್ಯವೆಂಬ ಲೇಖನದಲ್ಲಿ ಹೇಳಿದೆ. ಗ್ರೀಕರ ತರುವಾಯ ಲ್ಯಾಟಿನ್ ಮತ್ತು ರೋಂ ಜನರು. ಇತಿಹಾಸವೆಂಬ ಅರ್ಥದಲ್ಲಿ ಹಿಸ್ಟೋರಿಯ ಎಂಬ ಪದವನ್ನು ಬಳಸಿ, ಗ್ರೀಕರು ಕಟ್ಟಿದ ಅರ್ಥವನ್ನೇ ಒಪ್ಪಿದರು. ಕೆಲವು ಶತಮಾನಗಳ ತರುವಾಯ ಜರ್ಮನ್ನರಲ್ಲಿ ಗೆಷಿಷ್ಟೆ ಎನ್ನುವ ಪದ ರೂಢಿಗೆ ಬಂತು; ಗೆಷಿಷ್ಟೆ ಎಂದರೆ ನಡೆದ ಸಂಗತಿಗಳು ಎಂದು ಜರ್ಮನ್ನರು ಅರ್ಥ ಕಟ್ಟಿದರು. ಆ ಪದದ ಅರ್ಥ ವಿಕಾಸಗೊಂಡಿತು. ಮಾನವನ ಸುಖದುಃಖಗಳು ಅನುಭವಗಳು ಜೀವನದ ಘಟನೆಗಳು ಮುಂತಾದವುಗಳ ಸಂಗ್ರಹಣೆಯೂ ಗತಕಾಲದಲ್ಲಿ ಇವುಗಳು ಬೀರಿದ ಪ್ರಭಾವದ ಪರಿಶೋಧನೆಯೂ ಕ್ರಮೇಣ ಇತಿಹಾಸದ ಸಾಮಗ್ರಿಗಳಾದವು. ಇತಿಹಾಸ ಮತ್ತು ಗೆಷಿಷ್ಟೆ ಪದಗಳು ಬೇರೆ ಬೇರೆ ಅರ್ಥ ಪಡೆದವು: ಗೆಷಿಷ್ಟೆ ಎಂದರೆ ನಡೆದ ಸಂಗತಿಯ ವಾಸ್ತವಿಕ ವಿವರಣೆಯೆಂದೂ ಇತಿಹಾಸವೆಂದರೆ ಆ ಸಂಗತಿಗಳಿಂದ ಉಂಟಾದ ಮಾನವನ ಅನುಭವವೆಂದೂ ಭಾವನೆ ಬೆಳೆಯಿತು. ಮಾನವನ ಹಿನ್ನೆಲೆಯ ನೋಟದಿಂದ ಉಂಟಾದ ಅನುಭವಗಳ ವಿವರಣೆಯೇ ಇತಿಹಾಸವೆಂಬ ದರ್ಶನ ಮೂಡಿದಾಗ ಇತಿಹಾಸವನ್ನೂ ಪುರಾಣ ಮತ್ತು ಕಟ್ಟುಕಥೆಗಳ ಗುಂಪಿಗೆ ಒಯ್ದಂತಾಯಿತು. ಸಂಗತಿ ಮತ್ತು ಘಟನೆಗಳ ವೈಜ್ಞಾನಿಕ ವಿವರಣೆ ಕೊಡತಕ್ಕ ಸಂಪ್ರದಾಯ ಹಿಂದೆ ಬಿತ್ತು.

	ಹತ್ತೊಂಬತ್ತನೆಯ ಶತಮಾನದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಸಾಹಿತ್ಯ, ಸಮಾಜಶಾಸ್ತ್ರಗಳು ಅಗಾಧವಾಗಿ ಪರಿವರ್ತನೆ ಹೊಂದಿದವು. ಇತಿಹಾಸದ ಗತಿಯೇ ಬದಲಾಯಿಸಿತು. ವೈಜ್ಞಾನಿಕವಾಗಿ ಇತಿಹಾಸದ ಅಭ್ಯಾಸ ಆರಂಭವಾಯಿತು. ಪ್ರಾಚೀನ ವಸ್ತುಗಳ ಸಂಗ್ರಹಣೆ, ಪ್ರಾಚೀನ ಅವಶೇಷಗಳ ಸಂಕಲನ, ಅವುಗಳ ರೂಪರೇಖೆಗಳ ಸಂಶೋಧನೆ ಮತ್ತು ವಿಮರ್ಶೆ, ಆಧಾರಭೂತವಾದ ನಿಯಮಗಳ ನಿರ್ಧಾರ, ಪರೀಕ್ಷಕ ಬುದ್ಧಿಗೆ ನಿಲುಕದ ವಿಚಾರಗಳನ್ನು ಪುರಾಣ ಮತ್ತು ಸಾಹಿತ್ಯ ಪ್ರಪಂಚದಿಂದ ಹೆಕ್ಕಿ ತೆಗೆದು ಜೋಡಿಸುವ ಹದ-ಇವು ಇತಿಹಾಸದ ವಿಮರ್ಶೆಯ ಹೆದ್ದಾರಿಯಾದುವು. ಇತಿಹಾಸದಿಂದ ಮಾನವನ ಪ್ರಗತಿಗೂ ಆತ್ಮವಿಕಾಸಕ್ಕೂ ಏನು ಉಪಕಾರವಾಗಿದೆಯೆಂಬ ವಿಚಾರವಾಗಿಯೂ, ಮಾನವ ಸಂಘಜೀವನಕ್ಕೂ ಏಕತೆಯ ಭಾವನೆಗೂ ಇದು ಯಾವ ರೀತಿಯ ಕಾಣಿಕೆ ಸಲ್ಲಿಸಿದೆಯೆಂಬ ವಿಚಾರವಾಗಿಯೂ ವಾದವಿವಾದಗಳು ನಡೆದುವು.

	ಈ ವಿಚಾರವಾಗಿ ವಿಜ್ಞಾನಿಗಳೂ, ಸಾಹಿತಿಗಳೂ, ಕಲಾವಿದರೂ ಯಾವ ನಿರ್ಧಾರಕ್ಕೂ ಬರಲಾರದೇ ಹೋದರು. ಪ್ರಕೃತಿ, ಮಾನವ, ಪ್ರತಿಭೆ, ಬುದ್ಧಿ ಈ ಗಹನ ವಿಚಾರಗಳನ್ನು ಕುರಿತು ರೂವ್ಯಾ ಎಂಬುವನು ಪ್ರಪಂಚದ ಕ್ರಾಂತಿಗಳನ್ನು ಕುರಿತ ತನ್ನ ಗ್ರಂಥದಲ್ಲಿ ವಿವೇಚಿಸಿದ್ದಾನೆ. ಈ ಗ್ರಂಥವೂ ಡಾರ್ವಿನ್ನನ ಆರಿಜಿನ್ ಆಫ್ ಸ್ಪೀಸಿಸ್ ಎಂಬುದೂ ಇತಿಹಾಸ ದರ್ಶನಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದವು.

	ಇದರ ಪರಿಣಾಮವಾಗಿ ಇತಿಹಾಸ ವಾದಗ್ರಸ್ತವಾಯಿತು. ಆಕಸ್ಮಿಕ ಘಟನೆಗಳಿಗೂ, ಕ್ರಾಂತಿ ವಿಪ್ಲವಗಳಿಗೂ, ಮಾನವನ ವ್ಯಾಪಾರಗಳಿಗೂ ಪರಿಸ್ಥಿತಿ ಅಥವಾ ಸನ್ನಿವೇಶವೇ ಮುಖ್ಯವೆಂಬುದು ಒಂದು ವಾದ. ಇದರಲ್ಲಿ ಮಾನವನ ಪಾತ್ರ ಅಲ್ಪವೆನ್ನುವ ವಿಚಾರ ಕೈಗಾರಿಕಾ ಕ್ರಾಂತಿಗೂ ವಿಜ್ಞಾನ ಪ್ರಪಂಚದ ನೂತನ ದರ್ಶನಕ್ಕೂ ಪ್ರಬಲ ಕಾರಣವಾದವು. ಮಾನವನ ಪ್ರತಿಭೆ, ಬುದ್ಧಿಶಕ್ತಿ, ನಿರಂತರ ಸಾಧನೆ-ಇವುಗಳಿಂದ ರಚನಾತ್ಮಕ ಕಾರ್ಯಗಳು ಜರುಗಿದರೂ ಪರಿಸ್ಥಿತಿಯ ಸಹಕಾರವಿಲ್ಲದಿದ್ದಲ್ಲಿ ಅವು ಫಲಕಾರಿಯಾಗಲಾರವು-ಎಂಬ ವಾದ ಪುಷ್ಟಿಗೊಳ್ಳುತ್ತ ಬಂತು.

	ಇಪ್ಪತ್ತನೆಯ ಶತಮಾನದಲ್ಲಿ ಕೂಡ ಇತಿಹಾಸದ ದೃಷ್ಟಿ ಯಾವುದು ಎಂಬ ವಿಚಾರದಲ್ಲಿ ಮಾನವನ ಮನಸ್ಸು ಮಸಕುಮಸಕಾಗಿದೆ. ಇಲ್ಲಿ ವ್ಯಕ್ತಿಯೇ ಪ್ರಧಾನವೇ ಅಥವಾ ಸನ್ನಿವೇಶಗಳೇ? ಈ ವಿಚಾರವಾಗಿ ವಾದವಿವಾದಗಳು ಮುಂದುವರಿದಿವೆ. ವ್ಯಕ್ತಿಯೇ ಇತಿಹಾಸಕ್ಕೆ ಆಧಾರ, ಅವನು ಪರಿಸ್ಥಿತಿಯ ಸೃಷ್ಟಿಕರ್ತ, ಎಲ್ಲ ಚಲನ ವಲನಗಳಿಗೂ ಮೂಲ ಎಂಬುದಾಗಿ ಕಾರ್ಲೈಲ್, ಫ್ರಾಯ್ಡ್ ಮೊದಲಾದ ಸುಪ್ರಸಿದ್ಧ ಸಾಹಿತಿಗಳು ವಾದಿಸುತ್ತ ಬಂದಿದ್ದಾರೆ. ಬಕಲ್ ಎಂಬ ತತ್ತ್ವಜ್ಞರು ಇದಕ್ಕೆ ವಿರುದ್ಧವಾದ ದೃಷ್ಟಿ. ಪರಿಸ್ಥಿತಿಯ ನಿರಂತರ ಪರಿವರ್ತನೆಯೇ ವ್ಯಕ್ತಿವಿಕಾಸಕ್ಕೂ ಸಮಾಜ ರಾಷ್ಟ್ರ, ಹಾಗೂ ಪ್ರಪಂಚದ ಏಳುಬೀಳುಗಳಿಗೂ ಪ್ರಬಲ ಕಾರಣವೆಂದೂ ವ್ಯಕ್ತಿಗೆ ಸ್ವಾತಂತ್ರ್ಯವಿಲ್ಲವೆಂದೂ ಅವನು ಪರಿಸ್ಥಿತಿಯ ಕೂಸೆಂದೂ ಆತ ಹೇಳುತ್ತಾನೆ. ಆತನ ದೃಷ್ಟಿಯಲ್ಲಿ ಇತಿಹಾಸವೆಂಬುದು ವ್ಯಕ್ತಿಯ ಸ್ವಯಂಪ್ರೇರಣೆಯಿಂದ ಉತ್ಪನ್ನವಾದದ್ದಲ್ಲ. ಕಾರ್ಲೈಲ್ ಮತ್ತು ಬಕಲ್‍ರ ಅರ್ಧ ಶತಮಾನಕ್ಕೂ ಮೀರಿ ವಿದ್ವತ್ ಪ್ರಪಂಚದ ಮನಸ್ಸು ಕಲಕಿದೆ.

	ಸಂಶೋಧನೆಗೆ ಅನುಕೂಲವಾದ ವಸ್ತು ಸಾಮಗ್ರಿಗಳ ವಿನಿಮಯ ಮತ್ತು ವಿಶ್ಲೇಷಣೆಯ ಪ್ರಯತ್ನ ಹಲವಾರು ವರ್ಷಗಳು ಜರುಗಿದರೆ ಒಂದೇ ದಿನದಲ್ಲಿ ಅವುಗಳ ಸಮನ್ವಯ ಸಾಧ್ಯವಾಗುವುದೆಂಬುದು ಅನೇಕ ಇತಿಹಾಸಜ್ಞರ ಮತ. ಬಹುಮುಖವಾದ ವಿಮರ್ಶೆ ನಡೆದಷ್ಟೂ ವಸ್ತು ಮತ್ತು ಮಾನವ ವ್ಯಾಪಾರಗಳ ಅರಿವು ಹೆಚ್ಚು ದೃಢವಾಗುತ್ತದೆ. ಅಂತರ್ಗತವಾದ ನಿಗೂಢ ತತ್ತ್ವಗಳೂ ಭಾವನೆಗಳೂ ಹೊಸ ಹೊಸ ಅರ್ಥ ತಳೆಯುತ್ತವೆ. ವಿಮರ್ಶೆಯ ಮತ್ತು ನಿರಂತರ ಸಾಧನೆಯ ಫಲವಾಗಿ ಅನೇಕ ಇತಿಹಾಸಗಳು ತಲೆದೋರಿವೆ: ಈಗಾಗಲೇ ಮಾನವೀಯ ಇತಿಹಾಸ, ಪ್ರಪಂಚದ ಇತಿಹಾಸ, ವರ್ಗಗಳ ಇತಿಹಾಸ, ಧರ್ಮ ಮತ್ತು ಧರ್ಮ ಸಂಸ್ಥೆಗಳ ಇತಿಹಾಸ ಎಂಬುದಾಗಿ ಅವು ಬೆಳೆದು ಬಂದಿವೆ. ಇತಿಹಾಸಜ್ಞರಲ್ಲಿ ಎರಡು ಅಭಿಪ್ರಾಯಗಳು ಪ್ರಬಲವಾಗಿವೆ. ರಾಜಕೀಯ ಪ್ರಪಂಚದ ಜೀವಾಳವೇ ಇತಿಹಾಸದ ಮರ್ಮ ಎನ್ನುವುದು ಒಂದು ವಾದ. ಮಾನವನ ಸಾಹಿತ್ಯ, ಸಮಾಜ, ಜೀವನ. ಕಲೆ ಮುಂತಾದುವೇ ಇತಿಹಾಸದ ತಿರುಳು ಎಂಬುದು ಇನ್ನೊಂದು ವಾದ. ರಾಜಕೀಯ ಜೀವನದಲ್ಲಿ ರಾಷ್ಟ್ರ, ಸರ್ಕಾರ, ಪಕ್ಷಗಳು ಇವುಗಳ ವರ್ತನೆಯೂ ಇತಿಹಾಸದಲ್ಲಿ ಪ್ರಧಾನವಸ್ತುವಾಗುತ್ತಾ ಬಂದಿದೆ. ಎಲ್ಲಿ ರಾಜಕೀಯಕ್ಕೆ ಮಾನ್ಯತೆಯಿದೆಯೋ ಅಲ್ಲಿ ಸಾಂಸ್ಕøತಿಕ ಜೀವನ ಗೌಣ. ಅದರ ಪಾತ್ರ ಜೀವನವಿಕಾಸದಲ್ಲಿ ಅಲ್ಪ.

	ಇತಿಹಾಸ ಪ್ರಗತಿಪರವಾಗಬೇಕಾದರೆ, ಮಾನವನ ಜೀವನ ಉತ್ತಮವಾಗಬೇಕಾದರೆ, ಸಂಸ್ಕøತಿ, ಕಲೆ, ಸಾಹಿತ್ಯ ಎಷ್ಟು ಪರಿಣಾಮಕಾರಿ ಎಂಬ ಅರಿವು ಪ್ರಬಲವಾಗುತ್ತಾ ಬರಬೇಕು. ಕಾರ್ಯಕಾರಣ ಜಗತ್ತಿನಲ್ಲಿ ಜರುಗುವ ಅಂಶಗಳ ತಿಳಿವಳಿಕೆ ಉಂಟಾದರೆ, ಮೆಟ್ಟಲು ಮೆಟ್ಟಲಾಗಿ ವಿಕಸನಗೊಂಡು ಬಂದ ಮಾನವನ ನಾಗರಿಕತೆಯ ಸತ್ಯದರ್ಶನವಾಗುತ್ತದೆ. ಘಟನಾವಳಿಗಳು ಬಿಡಿಬಿಡಿಯಾಗಿ ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಪ್ರತಿಯೊಂದು ಘಟನೆಗೂ ಕಾರಣಗಳಿವೆ. ಕಾರ್ಯಕಾರಣ ಸಮಂಜಸವಾದ ಅಂಶಗಳು ಭಾವೀ ಜಗತ್ತಿನಲ್ಲಿ ಜರುಗುವ ಅಂಶಗಳ ತಿಳಿವಳಿಕೆ ಉಂಟಾದರೆ, ಕಾರ್ಯಕಾರಣ ಸಮಂಜಸವಾದ ಅಂಶಗಳು ಭಾವೀ ಜಗತ್ತಿನಲ್ಲಿ ಜರುಗುವ ವಿಷಯಗಳ ರೀತಿನೀತಿ ರೂಪರೇಖೆಗಳನ್ನು ಸೂಚಿಸುತ್ತವೆ. ಇದು ವೈಜ್ಞಾನಿಕವಾಗಿಯೇ ಇದೆ. ನಿರ್ಜೀವ ವಸ್ತುಗಳ ವಿಮರ್ಶೆಯಲ್ಲಿ ಫಲಿತಾಂಶಗಳು ಏಕರೀತಿಯಾಗಿ ಸಂಶಯಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಜರಗುವುವು ಎಂದು ಘಂಟಾಘೋಷವಾಗಿ ಹೇಳಬಹುದು. ಆದರೆ ಮಾನವನ ನಡೆವಳಿಕೆ ಹಾಗಲ್ಲ. ನಭೋಮಂಡಲವನ್ನು ಭೇದಿಸಿ ಅದರಲ್ಲಿ ಅಡಗಿದ ಮೂಲಭೂತ ತತ್ತ್ವವನ್ನು ನಿರ್ದಿಷ್ಟವಾಗಿ ವಿವರಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆ ಮಾನವನ ಸ್ವಭಾವವನ್ನೂ ನಡೆನುಡಿಗಳನ್ನೂ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಗೊಂದಲಮಯ ಜಗತ್ತಿನಲ್ಲಿ ದಾರುಣಕರ ಸನ್ನಿವೇಶದಲ್ಲಿ ಸ್ವಯಂಪ್ರೇರಣೆಯಿಂದ ವರ್ತಿಸುವ ಮಾನವ ಹೇಗೆ ನಡೆದುಕೊಳ್ಳುತ್ತಾನೆಂಬುದು ಕುತೂಹಲಕರ. ಯುದ್ಧ, ಶಾಂತಿ, ಆಂದೋಲನ, ವಿಪ್ಲವ ಇಂಥ ನಾನಾ ಸನ್ನಿವೇಶಗಳಲ್ಲಿ ಮಾನವನ ಚಂಚಲ ಮನಸ್ಸು ನಡೆದುಕೊಳ್ಳುವ ರೀತಿಯಿಂದ ಇತಿಹಾಸ ವಿಸ್ಮಯಕಾರಿಯಾಗಿದೆ. ಆದ್ದರಿಂದಲೇ ಕಾರ್ಯಕಾರಣ ಸಮಂಜಸವಾಗಿ ವ್ಯಕ್ತಿಯ ಮತ್ತು ಮಾನವಸಮಾಜದ ವಿಮರ್ಶೆಯೂ, ನಿರ್ಧಾರಗಳೂ ಮಸಕುಮಸಕಾಗಿವೆ. ದೈವ ಮತ್ತು ಅಸುರೀ ಪ್ರವೃತ್ತಿಗಳ ನಡುವೆ ಹೊಯ್ದಾಡುವ ಮಾನವನ ಮನಸ್ಸು ಇದಕ್ಕೆ ಕಾರಣ. ಮನಶ್ಯಾಸ್ತ್ರ ಭೌತಶಾಸ್ತ್ರ ಮತ್ತು ಇತರ ಶಾಸ್ತ್ರಗಳನ್ನು ಅಭ್ಯಾಸ ಮಾಡಿದವರು, ಆ ಚರಾಚರ ವಸ್ತುಗಳಂತೆಯೇ ಮಾನವನ ವರ್ತನೆಯೂ ಇಲ್ಲವೆಂಬುದನ್ನು ಅರಿಯಬಲ್ಲರು. ಬಾಹ್ಯ ಪ್ರಪಂಚದಲ್ಲಿ ಜರುಗುವ ವಿಚಿತ್ರ ವ್ಯಾಪಾರಗಳನ್ನು ನಿಯಂತ್ರಿಸಲು ಮಾನವನಿಗೆ ಸಂಪೂರ್ಣ ಶಕ್ತಿಯಿಲ್ಲ. ಸಮುದ್ರದಲ್ಲಿ ಅಲೆಗಳ ಮೇಲೆ ಅಲೆಗಳು ಬಂದು ಬಡಿಯುವಂತೆ, ಅಗೋಚರವಾದ ಅಗಮ್ಯವಾದ ಅಂಶಗಳು ಮಾನವನ ಇತಿಹಾಸವನ್ನು ತಿದ್ದುತ್ತಿರುತ್ತವೆ.

	ಮಾನವನಿಗೆ ತನ್ನ ಮನಸ್ಸನ್ನು ಮತ್ತು ಹೊರಗಿನ ವಸ್ತುಗಳ ಚಲನವಲನಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಿ, ತಾನು ಸೂಚಿಸುವ ದಾರಿಯಲ್ಲಿ ಅವು ವರ್ತಿಸುವಂತೆ ಪ್ರಚೋದಿಸಲು ಸಾಧ್ಯವೆಂಬುದೂ ನಿಜ. ಇತಿಹಾಸವೆಂದರೆ ವ್ಯಕ್ತಿ ತನ್ನ ಸ್ವಯಂಪ್ರೇರಣೆಯಿಂದ ನಿಶ್ಚಯಿಸಿ ನಡೆಸಿದ ವ್ಯಾಪಾರ. ಅವನು ಸೃಷ್ಟಿಸಿದ ಸಂಸ್ಥೆಗಳು, ಅವುಗಳ ನಿಕಟ ಸಂಬಂಧ ವೈಪರೀತ್ಯಗಳು, ಅವುಗಳಿಂದ ಉತ್ಪನ್ನವಾದ ಭಾವನೆಗಳು-ಇವುಗಳೆಲ್ಲ ಕೂಡಿ ಇತಿಹಾಸದ ಸೃಷ್ಟಿಯಾಗುತ್ತಿರುತ್ತದೆ. ಪರಿಸ್ಥಿತಿಯನ್ನು ತನ್ನ ಮನೋಬಲದಿಂದ ಜಯಿಸಿ ಬಹುಮಟ್ಟಿಗೆ ಪ್ರಕೃತಿಯ ವ್ಯಾಪಾರವನ್ನು ತಡೆಗಟ್ಟುವ ಶಕ್ತಿ ಅವನಲ್ಲಿ ಅಂತರ್ಗತವಾಗಿದೆ ಎಂಬ ಭಾವನೆಯೂ ಕೂಡ ಬೇರೂರುತ್ತದೆ. ಸಂಸ್ಥೆಗಳ ರಚನೆ ಮತ್ತು ಅವುಗಳ ವ್ಯಾಪಾರದ ನಿಯಂತ್ರಣ ಶಕ್ತಿ ಮಾನವನಲ್ಲಿ ಸಹಜವಾಗಿದೆಯೆಂಬುದೇ ಈ ಭಾವನೆಗೆ ಕಾರಣ. ಮಾನವ ತನ್ನ ರಾಗದ್ವೇಷಾದಿಗಳನ್ನು ಸಂಸ್ಥೆಗಳ ಮೂಲಕ ಹರಿಸಿ ಅವುಗಳನ್ನು ರಚನಾತ್ಮಕ ಮಾರ್ಗಗಳಲ್ಲಿ ತೊಡಗಿಸುವ ಕೆಲಸದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾನೆ. ಸಂಯಮ, ಸಂಧಾನ ಮತ್ತು ಸಮನ್ವಯ ರೀತಿಗಳಲ್ಲಿ ಅನಿಶ್ಚಿತ ಮತ್ತು ಅಗಮ್ಯ ಅಂಶಗಳನ್ನು ನಿಯಂತ್ರಿಸಿದ್ದಾನೆ.

	ಅಕಾರಣವಾಗಿ ಮತ್ತು ಆಕಸ್ಮಿಕವಾಗಿ ಆದ ಘಟನೆಗಳು, ವ್ಯಕ್ತಿ ಪ್ರಧಾನವಾಗಿ ಸ್ವಯಂಪ್ರೇರಣೆಯಿಂದ ಮಾನವ ಸೃಷ್ಟಿಸಿದ ಜಗತ್ತು; ಅದರ ವ್ಯಾಪಾರ; ಸಾಮಾಜಿಕ ನಿಯಮಗಳಿಗೆ ಅನುಗುಣವಾಗಿ ಉತ್ಪನ್ನವಾದ ಅಂಶಗಳು; ಕಾರ್ಯಕಾರಣ ವಿವೇಚನೆಯ ಫಲವಾದ ಸಮಂಜಸ ನಿರ್ಧಾರ; ಇವೇ ಮಾನವನ ಇತಿಹಾಸದ ಅಂತಃಸತ್ವ.					
(ಎಂ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ